Sunday, March 26, 2017

ಲೋಕಲ್ ತಯಾರಿ

1.
ಲೋಕಲ್ ರೈಲೆಂದರೆ
ದೊಡ್ಡ ತಯಾರಿ
ಎಲ್ಲಿ ಬರುವುದು ಯಾವ ರೈಲು
ಎಷ್ಟು ವೇಗ ಎಲ್ಲಿ ನಿಲ್ಲುವುದು
ಗುರಿ ಮುಟ್ಟುವುದೆ
ಹಳಿ ತಪ್ಪುವುದೆ
ದಾಟಿ ಮುಂದೆ ಹೋಗುವುದೆ
ಯಾವ ಬೋಗಿ ಫಸ್ಟ್ ಕ್ಲಾಸು
ಯಾವುದು ಲೇಡೀಸು
ಎಷ್ಟು ಎಚ್ಚರದಿಂದಿರಬೇಕು
ಅಲ್ಲಿ ನಿಂತವನು ಇಳಿಯುವುದು ಎಲ್ಲಿ
ಅವನ ಹಿಂದೆ ನಾನೇ
ನನ್ನ ಹಿಂದೆ ಯಾರು
ಹಣ ಇಡುವುದೆಲ್ಲಿ ಕನ್ನ-
ಡಕ ಜೇಬಿಗಿಳಿಸುವುದೇ
ಷೂಲೇಸು ಬಿಚ್ಚಿಹೋಗಬಹುದೇ
ರೈಲು ಬಂದಾಗ ಮುಂದಿಡುವುದು
ಬಲಗಾಲೇ ಎಡಗಾಲೇ
ಕಾಲ ಮುಂದೂಡಲೇ
ಎದೆ ಸೆಟೆದು ನುಗ್ಗಲೇ
ಈ ರೈಲ ಹತ್ತುವುದೇ
ಮುಂದಿನದಕ್ಕೆ ಕಾಯುವುದೇ
ಒ ಹಿರಿಯ ಷೇಕ್ಸ್ಪಿಯರ
ನೀನೇಕೆ ಹ್ಯಾಮ್ಲೆಟ್ ಸೃಷ್ಟಿಸಿದೆ

2
ಅಗೋ ರೈಲು
ಅಗೋಚರದಿಂದಗೋಚರಕೆ
ನಿಂತದ್ದೇ ಎಸೆದು ಬಿದ್ದ ಎಷ್ಟೊಂದು
ಎದುರಾಳಿಗಳು ಹಿಂದಿಂದ
ಕುಮ್ಮಕ್ಕು ಕೊಟ್ಟು ಮುಂದೆ
ನೂಕುವರು
ಕೆಳಗೆ ಕಾಲು ದೇಹ ಮೇಲೆ ಕೈಯಿ
ಹ್ಯಾಂಡಲ್ ನಿಂದ ಜೋತುಬಿದ್ದ ನೇರ ಸರಳರೇಖೆ
ಈಮುಖ ಹಿಂದ ಕಂಡದ್ದೆ
ಮುಂದೆ ಅವನೂ ಕಾಣಬಹುದೆ
ಈ ವ್ಯೂಹದೊಳಗೆ ತಳ್ಳಿದ್ದು
ಹೊಕ್ಕದ್ದು ಹೇಗೆ
ಯಾರ ಬೆನ್ನ
ತುರಿಕೆ ಕೆರೆದದ್ದು ನನ್ನ
ಕೈಯಲ್ಲಿ ಕಾಲಿಲ್ಲಿ ದೇಹ ಬಿಲ್ಲಿ-
ನಾಕಾರ
ಈ ಸ್ಟೇಷನಿಂದ ಆ ಸ್ಠೇಷನಿಗೆ
ಈ ಬಾಗಿಲಿನಿಂದ ಆ ಬಾಗಿಲಿಗೆ
ಯಾರು ಎದುರಾಳಿ
ಯಾವುದು ಯಾರ ಗುರಿ
ಒಳಹೊಕ್ಕು ಹೊರಬಂದ
ಈಕ್ಷಣಕ್ಕಾಗೇ ಇಷ್ಟೆಲ್ಲ ತಯಾರಿ?

3
ಇಳಿದದ್ದು ಅಂಧೇರಿ
ಇಳಿಯಬೇಕಾದ್ದೆಲ್ಲಿ
ಈಗೆಲ್ಲಿ ನನ್ನ ಕಾಲು
ನನ್ನ ಗುರುತ್ವ ಬಿಂದು
ಜೇಬಿನಲ್ಲಿದ್ದ ಐಡೆಂಟಿಟಿ
ಎಲ್ಲಿ ಅದನ್ನು ಹೊತ್ತ ಪರ್ಸು
ಬಾಚಣಿಗೆಯನ್ನೂ ಬಿಡದೆ
ಜೇಬು ಬಾಚಿದ್ದು ಯಾರು ಎಲ್ಲಿ
ಕಳೆದುಕೊಂಡ ತಯಾರಿ ಎಲ್ಲಿ
ಈಗ ನಾನಿರುವುದೆಲ್ಲಿ
ಎಲ್ಲಿ ನಾನೆಲ್ಲಿ ನಾನು
ಏಕೆ?




No comments: