Sunday, March 26, 2017

ಲೋಕಲ್ ತಯಾರಿ

1.
ಲೋಕಲ್ ರೈಲೆಂದರೆ
ದೊಡ್ಡ ತಯಾರಿ
ಎಲ್ಲಿ ಬರುವುದು ಯಾವ ರೈಲು
ಎಷ್ಟು ವೇಗ ಎಲ್ಲಿ ನಿಲ್ಲುವುದು
ಗುರಿ ಮುಟ್ಟುವುದೆ
ಹಳಿ ತಪ್ಪುವುದೆ
ದಾಟಿ ಮುಂದೆ ಹೋಗುವುದೆ
ಯಾವ ಬೋಗಿ ಫಸ್ಟ್ ಕ್ಲಾಸು
ಯಾವುದು ಲೇಡೀಸು
ಎಷ್ಟು ಎಚ್ಚರದಿಂದಿರಬೇಕು
ಅಲ್ಲಿ ನಿಂತವನು ಇಳಿಯುವುದು ಎಲ್ಲಿ
ಅವನ ಹಿಂದೆ ನಾನೇ
ನನ್ನ ಹಿಂದೆ ಯಾರು
ಹಣ ಇಡುವುದೆಲ್ಲಿ ಕನ್ನ-
ಡಕ ಜೇಬಿಗಿಳಿಸುವುದೇ
ಷೂಲೇಸು ಬಿಚ್ಚಿಹೋಗಬಹುದೇ
ರೈಲು ಬಂದಾಗ ಮುಂದಿಡುವುದು
ಬಲಗಾಲೇ ಎಡಗಾಲೇ
ಕಾಲ ಮುಂದೂಡಲೇ
ಎದೆ ಸೆಟೆದು ನುಗ್ಗಲೇ
ಈ ರೈಲ ಹತ್ತುವುದೇ
ಮುಂದಿನದಕ್ಕೆ ಕಾಯುವುದೇ
ಒ ಹಿರಿಯ ಷೇಕ್ಸ್ಪಿಯರ
ನೀನೇಕೆ ಹ್ಯಾಮ್ಲೆಟ್ ಸೃಷ್ಟಿಸಿದೆ

2
ಅಗೋ ರೈಲು
ಅಗೋಚರದಿಂದಗೋಚರಕೆ
ನಿಂತದ್ದೇ ಎಸೆದು ಬಿದ್ದ ಎಷ್ಟೊಂದು
ಎದುರಾಳಿಗಳು ಹಿಂದಿಂದ
ಕುಮ್ಮಕ್ಕು ಕೊಟ್ಟು ಮುಂದೆ
ನೂಕುವರು
ಕೆಳಗೆ ಕಾಲು ದೇಹ ಮೇಲೆ ಕೈಯಿ
ಹ್ಯಾಂಡಲ್ ನಿಂದ ಜೋತುಬಿದ್ದ ನೇರ ಸರಳರೇಖೆ
ಈಮುಖ ಹಿಂದ ಕಂಡದ್ದೆ
ಮುಂದೆ ಅವನೂ ಕಾಣಬಹುದೆ
ಈ ವ್ಯೂಹದೊಳಗೆ ತಳ್ಳಿದ್ದು
ಹೊಕ್ಕದ್ದು ಹೇಗೆ
ಯಾರ ಬೆನ್ನ
ತುರಿಕೆ ಕೆರೆದದ್ದು ನನ್ನ
ಕೈಯಲ್ಲಿ ಕಾಲಿಲ್ಲಿ ದೇಹ ಬಿಲ್ಲಿ-
ನಾಕಾರ
ಈ ಸ್ಟೇಷನಿಂದ ಆ ಸ್ಠೇಷನಿಗೆ
ಈ ಬಾಗಿಲಿನಿಂದ ಆ ಬಾಗಿಲಿಗೆ
ಯಾರು ಎದುರಾಳಿ
ಯಾವುದು ಯಾರ ಗುರಿ
ಒಳಹೊಕ್ಕು ಹೊರಬಂದ
ಈಕ್ಷಣಕ್ಕಾಗೇ ಇಷ್ಟೆಲ್ಲ ತಯಾರಿ?

3
ಇಳಿದದ್ದು ಅಂಧೇರಿ
ಇಳಿಯಬೇಕಾದ್ದೆಲ್ಲಿ
ಈಗೆಲ್ಲಿ ನನ್ನ ಕಾಲು
ನನ್ನ ಗುರುತ್ವ ಬಿಂದು
ಜೇಬಿನಲ್ಲಿದ್ದ ಐಡೆಂಟಿಟಿ
ಎಲ್ಲಿ ಅದನ್ನು ಹೊತ್ತ ಪರ್ಸು
ಬಾಚಣಿಗೆಯನ್ನೂ ಬಿಡದೆ
ಜೇಬು ಬಾಚಿದ್ದು ಯಾರು ಎಲ್ಲಿ
ಕಳೆದುಕೊಂಡ ತಯಾರಿ ಎಲ್ಲಿ
ಈಗ ನಾನಿರುವುದೆಲ್ಲಿ
ಎಲ್ಲಿ ನಾನೆಲ್ಲಿ ನಾನು
ಏಕೆ?




Saturday, March 25, 2017

ಸುರಂಗದಂಗಡಿಗಳು

ಚರ್ಚಗೇಟ್ ಬಳಿಯ
ಸುರಂಗದ ಕತ್ತಲಲ್ಲಿ ಎಷ್ಟೊಂದು ಜನ -
ಹುಡುಕಿ ಹೊರದಾರಿಗಳ ಒಳದಾರಿಗಳಿಂದ ಸಹಜ
ನಡೆಯುವವರು.
ಪುಸ್ತಕ ಪತ್ರಿಕೆ ಮಕ್ಕಳ ಆಟಿಕೆಗಳ ವ್ಯಾಪಾರಿಗಳು
ಸೂರ್ಯಾಸ್ತದವರೆಗೂ
ಸುರಂಗದಲ್ಲಿರುವವರು.

ಇತರರನೇಕರು ಸೂರ್ಯಾಸ್ತಕ್ಕೇ
ಎಚ್ಚರಗೊಳ್ಳುವರು
ಬಳುಕುತ್ತಾ, ಹೊಳಪುಸೂಸುತ್ತ ನಡೆದು,
ಕಣ್ಣಂಚಿನಲ್ಲೇ ಹೊಸ ಕ್ಷಿತಿಜ
ತೋರುವವರು.

ಕಂಡವ ಬೆಚ್ಚಿ ಬೀಳಬಹುದು
ಕನಸಿಂದ ಕಣ್ಣುಜ್ಜಿ ಧಿಗ್ಗನೇಳಬಹುದು
ಈ ಎಲ್ಲ ವೈವಾಟುಗಳಲಿ, ಮನುಷ್ಯನ
ಮನೋ-ವ್ಯಾಪಾರವೆಲ್ಲಿ?

ಸಾಲು ಸಾಲು ಸುರಂಗದಂಗಡಿಗಳ ಸಾಲು
ಕಂಡದ್ದು ಸಾಕೇ ಸಾಲದೇ?
ಹೊರಬರುವುದು ಅಂಗಡಿಯೊಳಹೊಕ್ಕು
ಸರಳವಲ್ಲ.
ಬಂದಾಗ ಬಂದವನು ಹೊಕ್ಕವನೇ ಅಲ್ಲ
ಮುಂದೆ ಯಾರ ಹಂಗಿಲ್ಲದೇ
ಹೊರಬಂದು ಒಳಹೊಕ್ಕು
ಒಳಹೊಕ್ಕು ಹೊರಬಂದು - ಕಾಣುವುದು
ಹಳಿತಪ್ಪಿದ ರೈಲು
ಸುರಂಗಕ್ಕೇ ನುಗ್ಗಿ
ನಾಳಿಗಿದೇ ಪ್ರಮುಖ ಸುದ್ದಿ.

ಮುಂಜಾನೆಯೆದ್ದಾಗ ಕನ್ನಡಿಯಲ್ಲಿ
ಕಂಡ ಮುಖ -
ಕಂಡದ್ದೇ ರಾತ್ರಿ ಸುರಂಗದಂಗಡಿಯಲ್ಲಿ
ಕಂಡದ್ದೇ ಅಂಗಡಿಯ ಮುಂಚಿನ ಕನಸಿನಲ್ಲಿ
ಕಂಡದ್ದೇ ಅದಕೂ ಮುಂಚಿನ ವಾಸ್ತವದ ಮಂಪರಿನಲ್ಲಿ
ಅಥವಾ ಕಾಣುತ್ತಲೇ ಇಲ್ಲವೇ
ಈಗ, ಇಲ್ಲಿ?

Monday, August 18, 2014

ದಿಗಂತ

ಮೊನ್ನೆ
ನನ್ನ ಪ್ರೇಮ ನಿನ್ನಲ್ಲಿ ನಿವೇದಿಸಿದಾಗ
ನಾವಿಬ್ಬರೂ ಸಮಾನಾಂತರ ರೇಖೆಗಳು
ರೈಲಿನ ಪಟ್ಟಿಗಳಂತೆ ಎಂದೆ

ಸಮಾನಾಂತರ ರೇಖೆಗಳು
ದಿಗಂತದಲ್ಲಾದರೂ ಕೂಡುತ್ತವಲ್ಲಾ
ಎಂಬುದೊಂದೇ ಸಮಾಧಾನ

ಪರಿಚಯ, ಏಪ್ರಿಲ್ 1988


ನೆನಪು

ನಿನ್ನ ಆಲೋಚನೆ
ಬಂದಾಗೆಲ್ಲಾ
ಹೃದಯ ಹೂವಾಗರಳುತ್ತಿತ್ತು.

ಈಗದೇ ಹೂವು
ಮುಳ್ಳಾಗಿ ಚುಚ್ಚುವುದೆಂದು
ನಾನೆಂದೂ
ಎಣಿಸಿರಲಿಲ್ಲ


ಪರಿಚಯ, ಮೇ-ಜೂನ್, 1987


ಅಸಂಗತ ನಾಟಕ

ಸಾವಿರಾರು ರೂಪಾಯಿ ಸುರಿದ
ಟೀವಿಯೆಂಬ ಪೆಟ್ಟಿಗೆಯನ್ನು ಖರೀದಿಸಿ
ಅದಕ್ಕಂಟಿ ಕುಳಿತು
ಕಣ್ಣನ್ನು ಯೇ ಜೋ ಹೈ ಜಿಂದಗಿಗೆ ಅಂಟಿಸುವ
ಹಮ್ ಲೋಗ್
ಮೂರ್ಖರ ಪೆಟ್ಟಿಗೆಯೆಂದು
ಹೀಗಳೆಯುವ
ಬುದ್ಧಿಜೀವಿಗಳು

ಪರಿಚಯ. ಫಬ್ರವರಿ, 1986


ವಿಹಾರ

ನಮ್ಮ ಮನೆಗೆ ಬಂದರೆ
ಮೋಡದ ಮೇಲೆ ವಿಹರಿಸಬಹುದು

ಎಂಬ ಬಡಸಾಹಿತಿಯ
ಕಥಾ ಸೃಷ್ಟಿಯ
ಕಲ್ಪನಾಲೋಕಕ್ಕೆ ಲಗ್ಗೆಯಿಟ್ಟಾಗ
ಅರಿವಾದದ್ದು ಕಡುವಾಸ್ತವ

ಅವನಮನೆಯಲ್ಲಿ ಕುರ್ಚಿಗಳಿಲ್ಲ
ಬರೆ ಮೋಡಾಗಳೇ

ಪರಿಚಯ ಮಾರ್ಚ್ 1986


ಇಬ್ಬರು

ನಾನು ಹಸಿವನ್ನು ಗೆದ್ದವನು ಎಂದವ ಒಬ್ಬ
ನಾನು ಸಾವನ್ನೇ ಗೆದ್ದವನು ಎಂದವ ಮತ್ತೊಬ್ಬ
ಇಬ್ಬರೂ ಒಬ್ಬರೆದುರಿನ್ನೊಬ್ಬರು
ಕುಳಿತಿದ್ದಾರೆ
ರಾಯರ ಮಠದೆದುದಿನಲ್ಲಿ
ಭಿಕ್ಷೆ ಎತ್ತುತ್ತಾ

ಪರಿಚಯ, ಜನವರಿ 1986.


Tuesday, December 25, 2012

ಗೆಲುವು

ದುರಂತ ನಾಯಕ ಸೋತ
ವಧು ಪರೀಕ್ಷೆಯಲ್ಲಿ
ಆದರೂ ಚಿಂತಿಲ್ಲ
ಛಲ ಹೊತ್ತು ಗೆದ್ದೇ ಬಿಟ್ಟ
ಮಧುಪರೀಕ್ಷೆಯಲ್ಲಿ

ತಯಾರಿ

ಪರೀಕ್ಷೆಗೆ ಮುನ್ನ ತಯಾರಿಗೆಂದು
ಹನುಮ ದಿನವೂ ಕಾಫಿ ಕುಡಿಯುತ್ತಾನೆ
ಪರೀಕ್ಷೆಯ ದಿನ ಮಾತ್ರ
ಕುಡಿಯುವುದಿಲ್ಲ, ಕಾಪಿ ಮಾಡುತ್ತಾನೆ

ಹಿಂದೆ-ಮುಂದೆ

ಮದುವೆಗೆ ಮುನ್ನ ನನ್ನವಳು
ದಿನವೂ ಮುತ್ತಿನ ಹಾರ ಉಣಬಡಿಸುತ್ತಿದ್ದಳು
ಮದುವೆಯ ಆನಂತರ
ದಿನವೂ ಬರೇ ಬಡಬಡಿಸುತ್ತಾಳ

ಶ-ಕುಂತಳೆ

ಹಿಂದೆ
ದುಷ್ಯಂತ ಶಕುಂತಲೆಯನ್ನು ಮರೆಯಲು
ಅವನಿತ್ತ ಉಂಗುರ ಅರಿಯದೇ
ಮೀನ್ ಬಾಯ್ಗೆ ಕೊಟ್ಟಳು
ಇಂದು
ಶಕುಂತಲೆ ದುಷ್ಯಂತನನ್ನು ಮರೆಯಲೂ
ಅವನಿತ್ತ ಉಂಗುರ ಮರೆಯದೇ
Mean Boy ಗೆ ಕೊಟ್ಟಳು

ಹೊಸ ಕವಿತೆ

ಮೊದಲು ಹೀಗಿರಲಿಲ್ಲ... ಆಗಿತ್ತು ಕವಿತೆ ಬರೆವುದು ಕಷ್ಟ
ಓದುವಾಗ ಸ್ಪಷ್ಟ, ಓದುಗನಿಗದು ಇಷ್ಟ
ಈಗ ಹಾಗೇನಿಲ್ಲ. ಬರೆಯುವುದು ನಮ್ಮಿಷ್ಟ
ಅರ್ಥವಾಗದಿದ್ದರದು ನಿಮ್ಮ ಕರ್ಮ ಕಷ್ಟ
ಬರೆದವನಿಗೂ ಅದು ಇದ್ದೀತು ಅಸ್ಪಷ್ಟ

ಸಂಪಾದಕರಿಗೆ

ಸಂಪಾದಕರೆ ನಮಸ್ಕಾರ, ಇಲ್ಲಿದೆ ಕಾದಂಬ್ರಿ
ಸಾಕಷ್ಟು ಉಪ್ರು ಖಾರ, ಮಸಾಲೆಯ ಕೋಸಂಬ್ರಿ
ಧಾರಾವಾಹಿ ಹಾಕಿ ಧಾರಾಳ
ಬಂದೀತು ವಾರಾವಾರಾ ಬೈಗಳ
ಅದನೋದಲಂತೂ ಕೊಳ್ಳುವರು ಜನ, ನಂಬಿದರೆ ನಂಬ್ರಿ

ಪ್ರೇಯಸಿಯ ಮುಖ

ನನ್ನ ಪ್ರೇಯಸಿಯ ಮುಖ ಗಡಿಯಾರದಂತೆ
ಅಲ್ಲಲ್ಲಿ ಚುಕ್ಕೆ ಮುಳ್ಳುಗಳ ಚಿಂತೆ
ಅವುಗಳನಳಿಸಲು ಬಳಸುವಳು ಕ್ರೀಮು
ಪ್ರತಿದಿನವೂ ಮೊಡವೆಗೆ ಹೊಸಬಗೆಯ ಮಲಮು
ಬದಲಾಗದಾದರೂ ಅವಳ ಮುಖ, ಕರಗುವುದು ಹಣದ ಕಂತೆ

ವೈದ್ಯರೇ.... ಕೇಳಿ

ವೈದ್ಯರೇ ನಮಸ್ಕಾರ ಚೆಕಪ್ಪಿಗೆ ಬಂದೆ
ಡಯಾಬಿಟಿಸ್ ಎಂದು ಹೇಳಿದ್ದಿರಿ ಹಿಂದೆ
ಸಕ್ಕರೆಯಂತಹ ದೇಹ ತಪ್ಪದಿದ್ದೀತೆ ಹೇಳಿ
ಉಪ್ಪುಂಡ ಮೇಲೆ ಬಿಪಿಯೂ ಬಂದೀತು ಕೇಳಿ
ನನ್ನ ಸಂಪಾದನೆಯೂ ಹೆಚ್ಚುವುದು ಇನ್ನು ಮುಂದೆ

ಕಾಲೇಜುರಂಗ

ಕಾಲೇಜಿಗೆ ಹೋಗುವುದೆಂದರೆ ಜ್ಯಾಮಿತಿ ಶಾಸ್ತ್ರವೇನು?
ಸುತ್ತುವುದು ಸರ್ಕಲ್ಲು, ಹೊಡೋಯುವುದು ಲೈನು?
ಕಡೆಗೇನು? ಮಿಕ್ಕವರು ನನಗಿಂತ ಮೇಲು
ನಾಸು ಮಾತ್ರ ಎಂದಿನಂತೆ ಫೇಲು
ಪ್ರತಿವರ್ಷ ಮರುಕಳಿಸುವ ಚರಿತ್ರೆ ಇದೇನು?!

ಸಖ

ಹೇ ಪ್ರಾಣ ಸಖಿ, ನಿನ್ನ ಪಡೆದ ನಾನೇ ಸುಖಿ
ಬಾ ಚಂದ್ರಮುಖಿ, ಬೇಡ ಬೇರೊಬ್ಬಳ ಮುಖಾಮುಖಿ
ಎಂದು ಹೇಳುವಾಗಲೇ ಬಂದು
ಅಹುದೇ ಹುಡುಗಾ ಎಂದು
ಬಂದಳು ಸಖಿ, ಕಟ್ಟಿ ಬಿಟ್ಟಳು ರಾಖಿ

ಪದ್ಯ ಮದ್ಯಗಳ ಮಧ್ಯ

ಪದ್ಯಕ್ಕೂ ಮದ್ಯಕ್ಕೂ ಹತ್ತಿರದ ಸಂಬಂಧವುಂಟು
ಅಕ್ಕಿಗೂ ಅನ್ನಕ್ಕೂ ಇರುವಂತಹ ಗೆಳೆತನದ ನಂಟು
ಅಕ್ಕಿಗೆ ನೀರು ಸೇರಿ ಒಲೆಗೇರಿದಾಗ ಅನ್ನ ರೆಡಿ
ಮದ್ಯಕ್ಕೆ ನೀರು ಸೇರಿ ತಲೆಗೇರಿದಾಗ ಪದ್ಯವೂ ಬಂತು ಬಿಡಿ
ನೀರು ಹೆಚ್ಟಾದರೆ ಅನ್ನ ಆದೀತು ಅಂಟು, ಮದ್ಯ ಹೆಚ್ಚಾದರೆ ಪದ್ಯವಾಗದು ಪ್ರಿಂಟು
[ಹಾಗೇ, ಮದ್ಯ ಹೆಚ್ಚಾದರೆ ಹೆಣ್ಣು ಆಗುವಳು ಗಂಡು!]

Thursday, June 19, 2008

ಓದಿ ಹೋದವಳು




ನಟಿಸುವುದ ಮರೆಥೆ
ಬರೆಯುವೆನು ಕವಿಥೆ
ಎಂದ ಚಿತ್ರನಟಿ ರಾಧಿ
ದ್ವಿಗುಣ ಅಪರಾಧಿ
ನಂಬಿಲ್ಲವಾದರೆ ಅವಳ ಕವಿತೆಗಳನ್ನು ಓಧಿ


ಪಾರ್ಟಿ [ಕಮ್ಯುನಿಸ್ಟ್ ಪಾರ್ಟಿ ಎನ್ನಲೂಬಹುದು]


ಬನ್ನಿ ಹಾಕುವೆ ಶುದ್ಧ ಸರ್ಕಾರಿ ಊಟ
ಮತ್ಸ್ಯವಿಲ್ಲ ಮಾಂಸವಿಲ್ಲ ಇಲ್ಲ ಮೂಳೆ ಕಾಟ
ಮದ್ಯವಿಲ್ಲ ಮದಿರೆಯಿಲ್ಲ ನೀರ್ತುಂಬಿದ ಲೋಟ
ಕ್ಯಾಲರಿಗನುಸಾರವಾಗಿ ಒಬ್ಬೊಬ್ಬರಿಗೂ ಕೋಟ
ಸಿಹಿಯು ಇಲ್ಲ ಕೊಬ್ಬು ಇಲ್ಲ ಒಣ ತರಕಾರಿ ತಟ್ಟೆ
ಸೀರೆಯುಟ್ಟ ನೀರೆಯರ ಮೈತುಂಬಾ ಬಟ್ಟೆ
ಎರ್ಡು ಲೋಟ ನೀರ್ನಿಂದ ಮನಸು ಹಾರದು ತೊಲೆ
ಖಾಲಿ ತಟ್ಟೆ ಖಾಲಿ ಹೊಟ್ಟೆ ಹಾಲಿ ಖಾಲಿ ತಲೆ
ಬಾಳೆ ಎಲೆ ಬಿಡಿಸಿ ಹಾಸಿ ನೆಲದ ಮೇಲೆ ಮಣೆ
ಅರಿಥಿಯಿಲ್ಲ, ನಾನೂ ಇಲ್ಲ, ಖಾಲಿಯಾದ ಕೋಣೆ


ಪ್ರೀತಿ




ಗಂಡನ್ನೇ ತಬ್ಬಿ ನುಂಗಿಬಿಡುವ ಪ್ರೀತಿ
- ಅದು ಹೆಣ್ಣು ಜೇಡದ ರೀತಿ
ಹೀಗಾಗಿ ನೀ ನನ್ನ ಬಯಸಿದರೂ ಬೇಡ
ಜೇಡ ನೀನಾಗಬೇಡ


ಶತಾಯ ಗತಾಯ




ಖುಶಿಯಿಂದಿದ್ದ ಶತಪಾದ
ಶತಪಾದ ಹಾಕುತ್ತಾ ಶಥಪಥ
ಕೇಳಲೊಂದು ದಿನ ಕುಪ್ಪಳಿಸುವ ಕಪ್ಪೆ
(ಅದು ಶುದ್ಧ ಬೆಪ್ಪೇ!)
"ಉದ್ದುದ್ದ" ನಡೆವಾಗ ಶತಪಾದ..
ಬೆಳೆಸುವುದು ನೀನಾವುದಾದ ಮೇಲಾವಪಾದ?
ಯೋಚಿಸಿದ ಚಿಂತಿಸಿದ ಶತಪಾದ: ತಿಳಿಯಲಿಲ್ಲ
ಆ ಕೋಣೆಯ ಮೂಲೆಯಿಂದವನ ಪಾದ ಬೆಳೆಯಲಿಲ್ಲ.
ಯೋಚಿಸಿ, ಯೋಚಿಸಿ ಶತಪಾದ, ಹಾಕಿ ಶಥಪಥ
ಹಾಕಿ, ಹೆಜ್ಜೆ, ಯೋಚಿಸಿ, ಯೋಚಿಸಿ, ನಡೆಯುವುದನ್ನೇ ಮರೆಥ.

ಅರ್ಥ ಶಾಸ್ತ್ರ



ಯಾರಿಗೆ ಬೇಕು ಅರ್ಥ?
ನನಗಿಲ್ಲ ಸ್ವಾರ್ಥ.

ವಿಸರ್ಜನೆಯ ಬಗ್ಗೆ ಒಂದು ಸಿಂಹಾವಲೋಕನ



ಎದುರಿಗೆ ನಿಂತರೆ ಸಿಂಹ, ಕೇಳಿಸಿದರೆ ಘರ್ಜನೆ
ಸರಳವಾಗಿ ಆಗುವುದು ಮೂತ್ರ ವಿಸರ್ಜನೆ


ಕ್ರಿಸ್ತ ಶೆಕೆ





ಕವಿಯು ತಾನೇ ಕವಿತೆ ಬರೆವೆನೆಂದುಕೊಳ್ಳಲಿ ಬಿಡಿ
ಪೋಲೀಸನೂ ಕಳ್ಳನಿಗೆ ತಾನೇ ತೊಡಿಸಲಿ ಬೇಡಿ
ಅವರಿಗೆಲ್ಲಾ ತಿಳಿಯದು ಪಾಪವು
ನಾನೆ ಸತ್ಯವು, ನಾನೆ ಜೀವವು ನಾನೆ ಪೋಲೀಸರ ಬೇಡಿ
ನಾನೆ ಕಳ್ಳನು ನಾನೆ ಕವಿತೆಯು ನಾನೆ ಸೂರ್ಯನ ತಾಪವು

ರಾಜಾ ಸೀಟ್


ಕುಪ್ಪಳಿಸಿದಾಗ ಹಕ್ಕಿ ಹಾರಿದಂತೆ ಕಾಣುವ ಕಪ್ಪೆ
ಕುಂಡೆಯೂರದೆಯೇ ನೆಲದ ಮೇಲೆ ಕೂರುವುದು ತಪ್ಪೇ?

ಹೆಣ್‌ಸಂಖ್ಯೆ




ಮರಳಿ ಯತ್ನವ ಮಾಡುವರು ಮೂರು ಹೆಣ್ಣು ಹೆತ್ತವರು
ಸಾಧ್ಯತೆ ೫೦ರಷ್ಟು ಹೆಣ್ಣೇ ಹೆರಬಹುದು ಮತ್ತವರು
ಗಂಡು ಮಗ, ಮಕ್ಕಳಿದ್ದವರು ಅಲ್ಲಿಗೇ ನಿಲ್ಲಿಸುವುದು
ಈ ಜಗದ ಹೆಣ್‌ಸಂಖ್ಯೆಯ ಬಗ್ಗೆ ತಿಳ್ಳಿಸುವುದು.

ಮೊಲದ ಬಗ್ಗೆ ಒಂದು ಕವಿತೆ



ಈ ಕವಿತೆಯ ವಸ್ತು ಮೊಲ
ಅದರ ಹವ್ಯಾಸಗಳ ಉಲ್ಲೇಖ ಮಾತ್ರ ಇಲಾ

ಹುಟ್ಟುಗುಣದ ಬಗ್ಗೆ ಅವಲೋಕನ

ಯಾವ ಕೋಮಟಿ ಶೆಟ್ಟಿ
ದುಂದುಗಾರನಾಗಿರಲಿಲ್ಲ ಎಂಬುದು ಗಟ್ಟಿ
[ಇದನ್ನು ಬರೆಯಲಿಲ್ಲ ಕೆ.ಟಿ.ಗಟ್ಟಿ]

ಹೆಸರಿನ ಬಗ್ಗೆ ಒಂದು ಮಂಗಾವಲೋಕನ


ಹೆಸರು ಹನುಮಂತೂ.
ಬಾಲವೊಂದಿಲ್ಲ ಅಂತೂ, ಇನಿತೂ.